ಶನಿವಾರ, ಏಪ್ರಿಲ್ 21, 2012

ಅಮ್ಮನ ಮಡಿಲು :)

ಅಮ್ಮ ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ.





















ಕಂಡ ಕನಸೆಲ್ಲ ನುಚ್ಚು ನೂರಾಗಿದೆ,
ನನ್ನ ಆಶಾಗೋಪುರ ಕುಸಿದುಬಿದ್ದಿದೆ,
ಮನವ್ಯಾಕುಲಗೊಂಡು ನಿಂತಿಹೆ ದಾರಿ ಕಾಣದೆ.

ಚಿಕ್ಕ ಮಗುವಂತೆ ಮುದ್ದಿಸು ನನ್ನೊಮ್ಮೆ,
ತುಂಬು ನನ್ನಲ್ಲಿ ನವ ಉತ್ಸಾಹ ,
ಚೈತನ್ಯದೊಲುಮೆ,
ನಾ ಮತ್ತೆ ಅಂಬೆಗಾಲಿಡುವೆ ಈ ಜಗದೊಳಗೆ,
ಹೊಸ ಕನಸು ಆಶಯದ ಜೊತೆಗೆ. 

ಅಮ್ಮ ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ.





ಭವಿತವ್ಯದ ಕನಸು ... :)

ಬಾಲ್ಯದಲ್ಲೊಂದು ದಿನ,
ಜಗಲಿಯ ತುದಿಯಲ್ಲಿ ಕುಂತು ಕಂಡ ಭವಿತವ್ಯದ ಕನಸು,
ಇನ್ನೂ ಆಗಲಿಲ್ಲ ಅದು ನನಸು.















ವಿದ್ಯಾದಾನ ಮಾಡುವ ಶಿಕ್ಷಕಿಯಾಗಬೇಕು, 
ಜ್ಞಾನ ದೀವಿಗೆಯ ಹೊತ್ತಿಸಬೇಕು ಎಂಬ ಹುಮ್ಮಸ್ಸು, 
ಆದರೆ ಅದಕಿನ್ನು ಪರಿಪಕ್ವವಾಗಿಲ್ಲ ನನ್ನೀ ಮನಸ್ಸು.

ದಿನಕಳೆದಂತೆ ಭವಿಷ್ಯದ ಕನಸೂ
ಅಭಿರುಚಿಯೊಂದಿಗೆ ಬದಲಿಸಿತು. 
ಸ್ಟೆತಾಸ್ಕೋಪ್ ನೊಂದಿಗೆ ನಂಟು ಬೆಳೆಸುವ  ಬಯಕೆ ಕಾಡತೊಡಗಿತು.

ಬುದ್ಧಿ ಬಲಿದಂತೆ ವೈದ್ಯಳಾಗುವ ಕನಸು, 
ಆಲಸ್ಯದೊಂದಿಗೆ ಸೇರಿ ಮರೀಚಿಕೆಯಾಯಿತು.
ಆಗಲೇ ಮನದೊಂದು ಮೂಲೆಯಲ್ಲಿ  ತಂತ್ರಜ್ಞೆಯಾಗಬೇಕೆಂಬ ಹಂಬಲ ದಿಢೀರನೆ ಮೂಡಿತು.

ಕಂಡ ಕನಸೊಂದಾದರೂ ನನಸಾಯ್ತೆಂಬಂತೆ,
ಕೊನೆಗೂ ನಾನಾದೆ ಒಬ್ಬ ತಂತ್ರಜ್ಞೆ.

ಆದರೂ ಮನಸಲ್ಲಿ ಅನಿಸುವುದು  ಒಮ್ಮೊಮ್ಮೆ ,
ಬಾಲ್ಯದಲ್ಲಿ ಕಂಡ ಭವಿತವ್ಯದ ಕನಸುಗಳೆಲ್ಲ ,
ಕಾಡದೆ ಹೋದೀತೆ ಇನ್ನು ಮುಂದೆ ??!! 
    
ಬಾಲ್ಯದಲ್ಲೊಂದು ದಿನ,
ಜಗಲಿಯ ತುದಿಯಲ್ಲಿ ಕುಂತು ಕಂಡ ಭವಿತವ್ಯದ ಕನಸು,
ಇನ್ನೂ ಆಗಲಿಲ್ಲ ಅದು ನನಸು.







ಶುಕ್ರವಾರ, ಏಪ್ರಿಲ್ 20, 2012

ಭಾವನೆಗಳ ತೀರದಲ್ಲಿ ...


ಮನಸೆಂಬ ಶರಧಿಯಲ್ಲಿ,
ಭಾವನೆಗಳ ತರಂಗ.
ಕನಸಿನ ಲೋಕದಲ್ಲಿ,
ಕಲ್ಪನೆಗಳ ಮೃದಂಗ.

ಮನವೇ ನೀನೆ ಹೇಳು,
ಏನು ಮಾಡಲಿ, ಎತ್ತ ಹೋಗಲಿ...


















ಗೊಂದಲಗಳ ಗೂಡಾಯ್ತು,
ಉತ್ತರಿಸಲಾಗದ ಪ್ರಶ್ನೆಗಳ ಮನೆಯಾಯ್ತು ,
ನನ್ನ ಪ್ರಶಾಂತ ಮನ.
ಬಿಡಿಸಲಾಗದ ಕಗ್ಗಂಟಾಯ್ತು,
ಕತ್ತಲೆಯಲ್ಲಿ ಕಳೆದ ಮುತ್ತಂತಾಯ್ತು,
ನನ್ನ ಪುಟ್ಟ ಮನ.

ಹೊರಬರುವದೆಂತು ಗೂಡ ಬಿಟ್ಟು,
ಹೇಗೆ ಬಿಡಿಸಲಿ ಭಾವಗಳ ಕಗ್ಗಂಟು,
ಯಾರ ಕೇಳಲಿ ಕಾಡುವ ಪ್ರಶ್ನೆಗೆ ಉತ್ತರವ ಹೊತ್ತು,
ಎಲ್ಲಿ ನಾ ಹುಡುಕಲಿ ಶಾಂತಿ ನೆಮ್ಮದಿಯೆಂಬ ಕಳೆದ ಮುತ್ತು.

ಮನವೇ ನೀನೆ ಹೇಳು,
ಏನು ಮಾಡಲಿ, ಎತ್ತ ಹೋಗಲಿ ...

ಮನಸೆಂಬ ಶರಧಿಯಲ್ಲಿ,
ಭಾವನೆಗಳ ತರಂಗ.
ಕನಸಿನ ಲೋಕದಲ್ಲಿ,
ಕಲ್ಪನೆಗಳ ಮೃದಂಗ....